ಬೈಂದೂರು ಕ್ಷೇತ್ರ: ಗೋಪಾಲ ಪೂಜಾರಿಯ ಮುಂದೆ ಗುರುರಾಜ್ ಗಂಟಿಹೊಳೆ ಗೆಲುವು ಸಾಧ್ಯವೇ? - ವಿಶ್ಲೇಷಣೆ
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಬೈಂದೂರು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆ. 1957ರಲ್ಲಿ ಕ್ಷೇತ್ರ ವಿಭಜನೆಯಾಗಿ ಪ್ರತ್ಯೇಕ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ಉದಯವಾಯಿತು. ಕ್ಷೇತ್ರದ ಮೊದಲ ಶಾಸಕರಾಗಿ ಯಡ್ತರೆ ಮಂಜಯ್ಯ ಶೆಟ್ಟಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅವರಿಗೆ ಪ್ರತಿಸ್ಪರ್ಧಿಯೆ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿ ಕ್ಷೇತ್ರದ ಮೊದಲ ಶಾಸಕರಾಗಿ ಹೆಗ್ಗಳಿಕೆ ಗಳಿಸಿದ್ದರು. ಕ್ಷೇತ್ರದಲ್ಲಿ ಬರೋಬ್ಬರಿ ಹನ್ನೊಂದು ಬಾರಿ ಕಾಂಗ್ರೆಸ್ ಜಯಗಳಿಸಿದ್ದರೆ, ಮೂರು ಬಾರಿ ಬಿಜೆಪಿ, ಒಂದು ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ.
ಈ ಕ್ಷೇತ್ರದಲ್ಲಿ ಈಗಿನ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಪೂಜಾರಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರು ಜನರಿಗೆ ಬಹಳ ಹತ್ತಿರದ ಜನ ಎಂಬ ಮಾತಿದೆ. ಅದರಲ್ಲೂ ಬಿಲ್ಲವರ ಭದ್ರ ಕೋಟೆ ಬೈಂದೂರಿನಲ್ಲಿ ಗೋಪಾಲ ಪೂಜಾರಿಯವರಿಗೆ ಎಲ್ಲ ಸಮುದಾಯದ ಸ್ವೀಕೃತಿ ಕೂಡ ಇದೆ. ಕಳೆದ ಬಾರಿ ಕೇವಲ ಹಿಂದುತ್ವ ಮತ್ತು ಮೋದಿ ಹೆಸರು ಹೇಳಿ ಗೆದ್ದಿದ್ದ ಬಿಜೆಪಿ ನಂತರ ದಿನಗಳಲ್ಲಿ ಆಗಿನ ಶಾಸಕರಾದ ಸುಕುಮಾರ್ ಶೆಟ್ಟಿಯವರು ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಆಕ್ರೋಶ ಕೂಡ ಜನರಲ್ಲಿತ್ತು. ಅವರದೆನ್ನಲಾದ ಹಲವು ಧ್ವನಿಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ್ದು ಇತಿಹಾಸ. ಆ ಕಾರಣಕ್ಕಾಗಿ ಬಿಜೆಪಿ ಹಾಲಿ ಶಾಸಕ ಸುಕುಮಾರ್ ಶೆಟ್ಟಿಯವರಿಗೆ ಟಿಕೆಟ್ ನೀಡದೆ ಬಿಜೆಪಿಯ ಕಾರ್ಯಕರ್ತನಿಗೆ ಮತ್ತು ಆರ್.ಎಸ್.ಎಸ್ ಮೂಲದಿಂದ ಬಂದ ಗುರುರಾಜ್ ಗಂಟಿಹೊಳೆಗೆ ಟಿಕೆಟ್ ನೀಡಿದೆ. ಬಿಲ್ಲವ ಸಮುದಾಯದ ಪ್ರಬಲ ನಾಯಕ ಗೋಪಾಲ್ ಪೂಜಾರಿಯವರು ಆಗಿರುವ ಕಾರಣ ಈ ಬಾರಿ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಿದೆ.
ಬಂಟ ಸಮುದಾಯದ ಮತಗಳು ಅತ್ಯಂತ ಹೆಚ್ಚಿರುವ ಕಾರಣ ಅಳೆದು ತೂಗಿ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ. ಆದರೆ ಗುರುರಾಜ್ ಗಂಟಿಹೊಳೆ ಕಾರ್ಯಕರ್ತರ ಮಟ್ಟದಲ್ಲಿ ಚಿರಪರಿಚತರಾಗಿದ್ದರೂ ಗ್ರಾಮೀಣ ಜನರ ಮಧ್ಯೆ ಮಾತ್ರ ಇನ್ನೂ ಕೂಡ ಅಪರಿಚಿತರು ಎಂಬ ಮಾತಿದೆ.
ಗೋಪಾಲ್ ಪೂಜಾರಿ ಸೋತರು ಜನ ಸ್ಪಂದನೆ ಮಾಡುತ್ತ ಮುಂದಿನ ಚುನಾವಣೆಗೆ ಸಿದ್ದರಾಗುತ್ತಿದ್ದರು. ಆ ಕಾರಣಕ್ಕಾಗಿ ಇಂದು ಗೋಪಾಲ್ ಪೂಜಾರಿಯವರ ಪ್ರತಿ ಸಭೆಯಲ್ಲೂ ನೂರಾರು ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ. ಕಳೆದ ಬಾರಿ ಉಡುಪಿಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲೂ ಬೈಂದೂರಿನಿಂದ ಸಾವಿರಾರು ಜನರನ್ನು ಸೇರಿಸಿದ್ದು ಗೋಪಾಲ್ ಪೂಜಾರಿಯವರ ಜನಪ್ರಿಯತೆಗೆ ಸಾಕ್ಷಿ ಎನ್ನುತ್ತಾರೆ ಅವರ ಅಭಿಮಾನಿಗಳು.
ಇನ್ನು ಗುರುರಾಜ್ ಗಂಟಿಹೊಳೆಯವರ ಕುರಿತು ಹೇಳುವುದಾದರೆ ಅವರು ಒರ್ವ ಆರ್.ಎಸ್.ಎಸ್ ಕಟ್ಟಾಳು. ಅವರನ್ನು ಅತ್ಯಂತ ಸರಳ ಜೀವಿಯೆಂದು ಬಿಂಬಿಸಲು ದೊಡ್ಡ ಮಟ್ಟದ ಪ್ರಯತ್ನಗಳು ಕೂಡ ಸಾಗುತ್ತಿದೆ. ಕೆಲವೊಂದು ರಾಜ್ಯ ಮಾಧ್ಯಮಗಳು ಕೂಡ ಅವರ ಪರ ಪ್ರಚಾರ ಕಾರ್ಯ ಕೈಗೊಂಡಿದೆ. ಹತ್ತು ವರ್ಷಗಳ ಕಾಲ ಆರ್.ಎಸ್.ಎಸ್ ಪ್ರಚಾರಕರಾಗಿದ್ದ ಅವರಿಗೆ ಆರ್.ಎಸ್.ಎಸ್ ಕೃಪಾಕಟಾಕ್ಷ ಇದ್ದೆ ಇದೆ. ಅವರ ಗೆಲುವಿಗೆ ಬಿಜೆಪಿ ಮತ್ತು ಸಂಘಪರಿವಾರದ ಎಲ್ಲ ಕಾರ್ಯಕರ್ತರನ್ನು ಬಳಸಿಕೊಳ್ಳಲಿದೆ. ಅದರೊಂದಿಗೆ ಈ ಹಿಂದಿನ ಚುನಾವಣೆಯ ತಂತ್ರದಂತೆ ಹಿಂದುತ್ವ ಮತ್ತು ಮೋದಿ ಅಲೆ ಸಹಾಯ ಪಡೆಯುವ ಸಾಧ್ಯತೆಯೂ ಇದೆ.
ಇದೆಲ್ಲದರ ಹೊರತಾಗಿ ಬಿಜೆಪಿಗೆ ಇಲ್ಲಿ ದೊಡ್ಡ ಹೊಡೆತವೆಂದರೆ ಅಂತರಿಕ ಭಿನ್ನಮತ. ಈ ಕ್ಷೇತ್ರದಲ್ಲಿ ಸ್ಥಳೀಯ ಭಿನ್ನಮತದೊಂದಿಗೆ, ಹೈಕಮಾಂಡ್ ಭಿನ್ನಮತದ ಮಾತು ಕೂಡ ಕೇಳಿ ಬರುತ್ತಿದೆ. ಯಡಿಯೂರಪ್ಪ ಅವರ ಅಭ್ಯರ್ಥಿ ಗುರುರಾಜ್ ಅಲ್ಲವಾಗಿರುವುದರಿಂದ ಅವರು ಈ ಕ್ಷೇತ್ರದಲ್ಲಿ ಆಸಕ್ತಿ ತೋರುವುದು ಕಡಿಮೆ ಎನ್ನಲಾಗುತ್ತಿದೆ. ಇನ್ನೂ ಸುಕುಮಾರ್ ಶೆಟ್ಟಿಯವರು ಆಕ್ರೋಶಿತರಾಗಿದ್ದಾರೆ. ಟಿಕೆಟ್ ಕೊಡುವ ಸಂದರ್ಭದಲ್ಲಿ ನಡೆಸಿಕೊಂಡ ರೀತಿಯ ಕುರಿತು ಅಸಮಾಧಾನ ಇದೆ ಎಂದು ಕಿಡಿ ಕಾರಿದ್ದಾರೆ. ಅದರಲ್ಲೂ ಮುಖ್ಯವಾಗಿ ಗುರುರಾಜ್ ಗಂಟಿಹೊಳೆ ಆರು ವರ್ಷದಿಂದ ಕ್ಷೇತ್ರದಲ್ಲಿ ಇರಲಿಲ್ಲ ಎಂಬ ಮಾತು ಆಡಿದ್ದಾರೆ. ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರು ಇವರ ಧ್ವನಿಗೆ ಧ್ವನಿಗೂಡಿಸಿರುವುದರಿಂದ ಗುರುರಾಜ್ ಗಂಟಿಹೊಳೆಗೆ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಅಂತರಿಕ ಬಂಡಾಯ ಶಮನಗೊಳಿಸುವ ಟಾಸ್ಕ್ ಕೂಡ ಇದೆ.
ಇದೆಲ್ಲದರ ನಡುವೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಪ್ರಬಲವಾಗಿದ್ದು ಈ ಮುಂಚಿನಿಂದ ಗೋಪಾಲ್ ಪೂಜಾರಿ ಅವರೇ ಅಭ್ಯರ್ಥಿಯೆಂದು ಗುರುತಿಸಿರುವುದರಿಂದ ಇಲ್ಲಿ ಬಂಡಾಯದ ತಲೆನೋವು ಕಡಿಮೆ ಇದೆ.
ಇನ್ನು ಸಮುದಾಯವಾರು ಲೆಕ್ಕಚಾರ ಹಾಕುವುದಾದರೆ
ಬಿಲ್ಲವರು, ಬಂಟರು, ಮೀನುಗಾರರು (ಮೊಗವೀರರು, ಕನ್ನಡ ಖಾರ್ವಿ, ಕೊಂಕಣ ಖಾರ್ವಿ) ಪರಿಶಿಷ್ಷ ಜಾತಿ, ಪಂಗಡ, ದೇವಾಡಿಗರು, ಕ್ಷತ್ರೀಯ ( ರಾಮಕ್ಷತ್ರಿಯ ಹಾಗೂ ಸೋಮ ಕ್ಷತ್ರೀಯ ), ಅಲ್ಪಸಂಖ್ಯಾತರು (ಮುಸ್ಲಿಂ, ಕ್ರೈಸ್ತ), ಬ್ರಾಹ್ಮಣ (ಬ್ರಾಹ್ಮಣ, ಜಿಎಸ್‌ಬಿ, ದೈವಜ್ಞ ), ವಿಶ್ವಕರ್ಮರು, ಜೋಗಿ, ಬೋವಿ, ಕುಲಾಲ ಹಾಗೂ ಬಳೆಗಾರ ಸಮುದಾಯದವರು ಇಲ್ಲಿನ ಮತದಾರರು. ಇಲ್ಲಿ ಹಿಂದುತ್ವಕ್ಕಿಂತ ಜಾತಿ ಲೆಕ್ಕಚಾರ ಹೆಚ್ಚು ಮೇಲುಗೈ ಸಾಧಿಸುದರಿಂದ ಸದ್ಯದ ಸ್ಥಿತಿಯಲ್ಲಿ ಗೋಪಾಲ್ ಪೂಜಾರಿ ಗೆಲುವಿನ ಸನ್ನಿಹಿತದಲ್ಲಿದ್ದಾರೆ. ಇವರಿಗೆ ಅಲ್ಪಸಂಖ್ಯಾತರ ಬೋನಸ್ ಮತಗಳು ಕೂಡ ಬೀಳಲಿದೆ ಎಂಬುವುದು ಕೂಡ ಗಮನಾರ್ಹ.
ಬೈಂದೂರು ಕ್ಷೇತ್ರದ ಒಟ್ಟು ಮತದಾರರು-2,27,134
ಮಹಿಳಾ ಮತದಾರರು-1,16,150
ಪುರುಷ ಮತದಾರರು-1,10,983
ಲಿಂಗತ್ವ ಅಲ್ಪ ಸಂಖ್ಯಾತರು–1
2018 ರ ಫಲಿತಾಂಶ
ಬಿ.ಎಂ.ಸುಕುಮಾರ ಶೆಟ್ಟಿ (ಬಿಜೆಪಿ) – 96,029
ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್) – 71,636
2013ರ ಚುನಾವಣಾ ಫಲಿತಾಂಶ
ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್)-82,277
ಬಿ.ಎಂ.ಸುಕುಮಾರ ಶೆಟ್ಟಿ (ಬಿಜೆಪಿ)-51,128
2008ರ ಚುನಾವಣಾ ಫಲಿತಾಂಶ
ಕೆ.ಲಕ್ಷ್ಮೀನಾರಾಯಣ (ಬಿಜೆಪಿ)-62,196
ಕೆ. ಗೋಪಾಲ ಪೂಜಾರಿ (ಕಾಂಗ್ರೆಸ್)-54,226
ಜಾತಿ ಲೆಕ್ಕಾಚಾರ (ಅಂದಾಜು)
ಬಿಲ್ಲವರು 53,000
ಬಂಟರು 55,000
ದೇವಾಡಿಗರು 32,000
ಖಾರ್ವಿ ಸಮುದಾಯ 9,000
ಪರಿಶಿಷ್ಟ ಜಾತಿ–12,000
ಪರಿಶಿಷ್ಟ ಪಂಗಡ–10,000
ಅಲ್ಪಸಂಖ್ಯಾತರು–22,000
Comments